
ಮೂಡಿಬಾ ದಿನಮಣಿಯೆ, ಮೂಡಣದ ಶಿಖರದಲಿ ।
ರೂಢಿಯನು ನೀನೋಡಿ, ನಗುತ ಹೊಳೆಹೊಳೆದು ॥
ನಾಡಜನರೆಚ್ಚೆತ್ತು ಕಣ್ತೆರೆದು ಕರಮುಗಿದು ।
ಕೂಡಿ ಕೃಷಿ ಕರ್ಮಗಳಿಗೆಂದೆ ಪೊರಟಿಹರು ॥೧॥
ಬಸವಕೊರಳಿನ ಗಂಟೆ ಸ್ವರನಾದದಿಂತಾನು ।
ಬಸವಳಿಯದಂತೆರೈತನಹಾಡಕೇಳಿ॥
ಹಸನಾಗಿ ಭೂಮಿಯನು ಉಳಲುಸಹಕರಿಸುವನು ।
ಫಸಲು ಪಡೆಯುವಯೋಗಿ, ಸಂತಸದಿ ನಲಿಯೆ ॥೨॥
ಉತ್ತುಬಿತ್ತಿದನೆಲದಿ ಬೆಳೆದಬೆಳೆಯನುಕಂಡು ।
ಚಿತ್ತದಲಿ ಸಂತಸವು ಉಕ್ಕಿಬರುತಿರಲು॥
ನಿತ್ಯ ಉಣಬಡಿಸುವನು, ಅನ್ನದಾತನೆ ರೈತ ।
ಪೃಥ್ವಿಯೊಳು ಯಿವಗುಂಟು ಶಿವನದಯೆ ನಿರತ ॥೩॥
ದೇಶವಾಳುವ ದೊರೆಯು ದೇಹದಂಡಿಪರೈತ ।
ಕೋಶತುಂಬಿಸುತಿಹರು ಶಿವನು ದಯೆದೋರೆ ॥
ದೋಷಗೈದರೆ ಪ್ರಕೃತಿ ಮುನಿಯೆಲೋಕದಿ ಎಲ್ಲ ।
ನಾಶವಾಗದೆ ಉಳಿಯದಯ್ಯ ನಿಜವಿದುವೆ ॥೪॥
ಇದು ಲೇಖಕ, ಜ್ಯೋತಿಷ್ಯ ಜ್ಞಾನರತ್ನ, ಯಕ್ಷಗಾನ ಸಾಹಿತಿ ದಿವಂಗತ ಕೆ ಅನಂತರಾಮ ಬಂಗಾಡಿ ಯವರು ಬರೆದ “ಪಂಚಗವ್ಯ” ಎಂಬ ಕವಿತಾ ಸಂಕಲನದಿಂದ ಆಯ್ದ ಸಾಲುಗಳು.
ಇನ್ನಷ್ಟು ಕವನಗಳನ್ನು ಓದಲು ಕಾಲ ನಿರ್ಣಯ ವೆಬ್ಸೈಟ್ ವೀಕ್ಷಿಸಿ
ಹೆಚ್ಚಿನ ಮಾಹಿತಿಗಾಗಿ ಕಾಲ ನಿರ್ಣಯ ಫೇಸ್ ಬುಕ್ ಪೇಜ್ ಲೈಕ್ ಮಾಡಿ ಹೆಚ್ಚು ಹೆಚ್ಚು ಮಂದಿಗೆ ಷೇರ್ ಮಾಡಿ