
ಅಂತ್ಯನಿನಗಾವುದು, ಪ್ರಾಣಹರಣದ ಕಾಲ |
ಅಂತ್ಯವಾಗುವುದಂದು, ಆರುವೈರಿಗಳಿಂಗೆ||
ಅಂತ್ಯಸುಖ ದುಃಖಗಳು ಅವಸಾನಕಾಲದಲಿ|
ಅಂತ್ಯಜೀವನದಾಟ ಮುಗಿದುಹೋಗಲುಯಿಲ್ಲಿ ||೧||
ಯಾರ ಕರೆದರುಬರುವವರಿಲ್ಲ ನಿನ್ನೊಡನೆ|
ಯಾರನೆರವದು ಸಿಗದು ವೇದನೆಗೆ ನೀನೆ ||
ಯಾರಿಲ್ಲ ಎನುತಿಂದು ನೀನಾಶೆ ಬಿಡುತಿರಲು|
ತೋರುವುದು ಪಥವೊಂದು ತೆರಳುವೆಯಪೇಳು||೨||
ಅಲ್ಲಿಹುದು ಪೂರ್ವಕರ್ಮದ ಘೋರ ನೋಟ |
ಇಲ್ಲಿಹುದು ನೀಗೈದ ತಪ್ಪುಗಳ ಆಟ||
ಮೆಲ್ಲನಡಿಯಿಟ್ಟೊಮ್ಮೆ ನೋಡು ಪಾತಕಕೊಪ|
ಎಲ್ಲ ಶಿಕ್ಷೆಯ ಮುಂದೆ, ಯಿಹುದು ಈಪಾಪ||೩||
ತರಳತರಳೆಯರಿಂಗೆ ಸಂಪದವ ಶೇಖರಿಸಿ |
ತರುಣಿಯರ ಸುಕಕಾಗ ಕಾತರಿಸಿಮನವಿರಿಸಿ||
ದುರಿತಪೊದ್ದಲುನೀನೆ, ಕಣ್ಮುಚ್ಚಿ ಸ್ವೀಕರಿಸಿ |
ಕರುಳ ಹಿಂಡುವ ನೋವಿಗೀಗಯಿಹೆ ಸಹಿಸಿ||೪||
ಮಾಡಿರುವದುಷ್ಪಲವ ತಿಂದು ಮುಗಿಯಿತೆ, ನೀನು |
ಆಡಿರುವ ಆಟವದು ತೀರಿತೈಯೇನು.? ||
ಕೂಡಲಾಗದೆ ಶಿವನ ಬೇಡಿಕೊಂಡರೆ ಮೋಕ್ಷ |
ನೀಡುವನು ಸಂಶಯವಪಡುವೆಯಾಕೀಗ ||೫||
ಇದು ಲೇಖಕ, ಜ್ಯೋತಿಷ್ಯ ಜ್ಞಾನರತ್ನ, ಯಕ್ಷಗಾನ ಸಾಹಿತಿ ದಿವಂಗತ ಕೆ ಅನಂತರಾಮ ಬಂಗಾಡಿ ಯವರು ಬರೆದ “ಪಂಚಗವ್ಯ” ಎಂಬ ಕವಿತಾ ಸಂಕಲನದಿಂದ ಆಯ್ದ ಸಾಲುಗಳು.
ಇನ್ನಷ್ಟು ಕವನಗಳನ್ನು ಓದಲು ಕಾಲ ನಿರ್ಣಯ ವೆಬ್ಸೈಟ್ ವೀಕ್ಷಿಸಿ
ಹೆಚ್ಚಿನ ಮಾಹಿತಿಗಾಗಿ ಕಾಲ ನಿರ್ಣಯ ಫೇಸ್ ಬುಕ್ ಪೇಜ್ ಲೈಕ್ ಮಾಡಿ ಹೆಚ್ಚು ಹೆಚ್ಚು ಮಂದಿಗೆ ಷೇರ್ ಮಾಡಿ