
ಆಡುವೆಯ ಚದುರಂಗ, ಜಗದರಂಗವೆನಿನಗೆ।
ಕೇಡಾಗದೈಯೆನುತ, ಮನದುಂಬಿನಲಿವೆ॥
ಕೂಡಿಡಲು ಧನಕನಕ ಚೋರರದೆ ಪಾಲಾಗೇ।
ಬಾಡುತಿಹೆ ಯಾಕೀಗ ಸಂಪದವು ಕಳೆಯೇ॥೧॥
ಹುಚ್ಚನೆಂದೆನಲೋರ್ವ ಹುಚ್ಚನಿಜ ತಾನಂದು।
ಹುಚ್ಚ ನೆಂದರೆಹುಚ್ಚು ಬಿಡುವುದೈ ನಿಜವು॥
ಹಚ್ಚದೆಯೆಸೊಡರನ್ನು ಕತ್ತಲೆಯೊಳಿಹೆ ಯಾಕೆ.?।
ಇಚ್ಛೆಯಿದು ನಿನಗಿಲ್ಲ ಬೆಳಕನೋಡಲಿಕೆ॥೨॥
ದೂರದಿಂ ಕಾಣುತಿಹೆ ಮೋಕ್ಷದಾ ಮಾರ್ಗವದು।
ಹಾರಿಹೋಗಲುನಿನಗೆ, ಆಗದೈಮನುಜ॥
ಸಾರುನೀ ಪಾಪವೆಂಬುವ ಮುಳ್ಳ ಸುರಿಸುತಲಿ।
ತೋರುವುದು ಸುಕೃತಫಲದಚ್ಚರಿಯತಿಳಿಯೋ॥೩॥
ಬರಬೇಕು ಎಂದೆನುತ ಬರಲಿಲ್ಲ ಈ ಭುವಿಗೆ।
ಇರಬೇಕು ಯೆಂದಾಶೆ ನಿನಗೇಕೇ.? ಇಲ್ಲಿ ॥
ಬರುವ ಜನ್ಮವುಯಾವುದೆಂದರಿಯೆನಿನಗಿಂದು।
ಕೊರಗು ಯಾತಕೆ! ಮರುಳ, ವಿಷಯವರಿಯೋ॥೪॥
ಪರತತ್ವ ಕೇಶಿರವಬಾಗುತಲಿ ನೀನನರಿತು।
ಧರೆಯೊಳಗೆ ಬಾಳುವುದೇ ಸರಿಕೇಳುಮುಂದೆ॥
ಹರಿವಜಲದಲಿ ನೀರ ಒಳ್ಳೆಯದು, ಈಜನುಮ।
ಸ್ಥಿರವಲ್ಲ, ಹರಿಪಾದ ಗತಿಯೆಂದೆ ತಿಳಿಯೋ॥೫॥
ಇದು ಲೇಖಕ, ಜ್ಯೋತಿಷ್ಯ ಜ್ಞಾನರತ್ನ, ಯಕ್ಷಗಾನ ಸಾಹಿತಿ ದಿವಂಗತ ಕೆ ಅನಂತರಾಮ ಬಂಗಾಡಿ ಯವರು ಬರೆದ “ಪಂಚಗವ್ಯ” ಎಂಬ ಕವಿತಾ ಸಂಕಲನದಿಂದ ಆಯ್ದ ಸಾಲುಗಳು.
ಇನ್ನಷ್ಟು ಕವನಗಳನ್ನು ಓದಲು ಕಾಲ ನಿರ್ಣಯ ವೆಬ್ಸೈಟ್ ವೀಕ್ಷಿಸಿ
ಹೆಚ್ಚಿನ ಮಾಹಿತಿಗಾಗಿ ಕಾಲ ನಿರ್ಣಯ ಫೇಸ್ ಬುಕ್ ಪೇಜ್ ಲೈಕ್ ಮಾಡಿ ಹೆಚ್ಚು ಹೆಚ್ಚು ಮಂದಿಗೆ ಷೇರ್ ಮಾಡಿ