ಚೈತ್ರ ಶುಕ್ಲ ಪ್ರತಿಪದೆಯ ದಿನ ಹೊಸ ಸಂವತ್ಸರವು ಪ್ರಾರಂಭವಾಗುವುದರಿಂದ ಈ ಸಂವತ್ಸರದ ರಾಜಾದಿಫಲವನ್ನು ಕೇಳುವುದರಿಂದ ಶುಭವಾಗಲಿದೆ.

ಸ್ವಸ್ತಿ ಶ್ರೀಮನ್ನಾರಾಯಣನ ನಾಭಿಕಮಲ ಸಂಭವನಾದ ವಿರಿಂಚಿ ಬ್ರಹ್ಮನ ದ್ವಿತೀಯ ಪರಾರ್ಧವಾದ ಶ್ವೇತವರಾಹ ಕಲ್ಪವೆಂಬ ಹಗಲಿನ ಏಳನೆಯ ವೈವಸ್ವತ ಮನ್ವಂತರದ ಇಪ್ಪತ್ತೆಂಟನೆ ಮಹಾಯುಗದ ನಾಲ್ಕನೆ ಪಾದವಾದ ಕಲಿಯುಗದಲ್ಲಿ ಈ ಸಂವತ್ಸರಾರಂಭಕ್ಕೆ 5122 ವರ್ಷಗಳಾದವು.
ಈ ಪ್ಲವ ಸಂವತ್ಸರದಲ್ಲಿ ಕುಜನು ರಾಜನೂ ಹಾಗೂ ಮಂತ್ರಿಯೂ, ಚಂದ್ರನು ಸೈನ್ಯೇಶ ಮತ್ತು ಮೇಘೇಶನೂ, ಶುಕ್ರನು ಸಸ್ಯಾಧಿಪ ಮತ್ತು ನೀರಸಾಧಿಪನೂ, ರವಿಯು ರಸೇಶನೂ, ಬುಧನು ಧಾನ್ಯಾಧಿಪತಿಯೂ ಮತ್ತು ಕುಜನು ಅರ್ಘೇಶನೂ ಆಗುವರು.
ಈ ಪ್ಲವ ಸಂವತ್ಸರದಲ್ಲಿ ಮೋಡಗಳು ನೀರನ್ನು ಯಥಾಯೋಗ್ಯವಾಗಿ ಕೊಡದೇ ಪೂರ್ವಪ್ರದೇಶದ ಬೆಳೆಗಳು ನಾಶವಾಗುವವು ಜನರಲ್ಲಿ ಕಲಹ, ರೋಗಭಯಗಳು ಇರುವವು. ಕುಜನು ರಾಜನಾದ್ದರಿಂದ ಭೂಮಿಯಲ್ಲಿ ಧನಧಾನ್ಯಗಳ ಕೊರತೆಯುಂಟಾಗುವುದು. ರಾಜರು ತಮ್ಮೊಳಗೆ ಪರಸ್ಪರ ಯುದ್ಧದಲ್ಲಿಯೇ ಆಸಕ್ತರಾಗುವರು.
ಮಂತ್ರಿಯೂ ಕುಜನಾದ್ದರಿಂದ ಮಳೆ ಕಡಿಮೆ ಆಗಲಿರುವುದು. ಧಾನ್ಯಗಳ ಬೆಲೆ ಹೆಚ್ಚಾಗಲಿದೆ. ಚಂದ್ರನು ಮೇಘೇಶನಾದ್ದರಿಂದ ನದಿ ಸರೋವರಾದಿ ನೀರಿನ ಆಕರಗಳು ವಿಪುಲವಾಗಿ ನೀರಿನಿಂದ ತುಂಬಿದ್ದು ಧಾನ್ಯಗಳ ವೃದ್ಧಿಯಿಂದ ಜನರು ಪ್ರಬಲರಾಗುವರು
ಈ ವರ್ಷ ಆವರ್ತವೆಂಬ ಮೇಘವು ಮೂರು ಕೊಳಗ ನೀರನ್ನು ಸುರಿಸುವುದು.
ಶುಭವಾಗಲಿ