ಸ್ವಸ್ತಿ ಶ್ರೀ ಶಾಲಿವಾಹನ ಶಕೆ ೧೯೪೨ ಶಾರ್ವರಿನಾಮ ಸಂವತ್ಸರದ ಪೌಷ ಶುದ್ಧ ೧ ಶ್ರವಣ ನಕ್ಷತ್ರ ಗುರುವಾರ 14- 01- 2021 ರ ಬೆ. 8.24ಕ್ಕೆ ರವಿ ಧನುರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುತ್ತಾನೆ. ಈ ಕಾಲವು ಮಕರ ಸಂಕ್ರಾಂತಿಯ ಪುಣ್ಯ ಕಾಲವಾಗಿದ್ದು 14ನೇ ಜನವರಿ ಬೆ. 8.14 ರಿಂದ ಸಂಜೆ 4.14 ವರೆಗೆ ಇದೆ.

ಶಕೆಯು 1942ರಲ್ಲಿ ಬವಕರಣದಲ್ಲಿರುವುದರಿಂದ ಆ ಸಮಯಕ್ಕೆ ಹೇಳಲ್ಪಟ್ಟ ವಾಹನಾದಿಗಳು ಈ ಕೆಳಗೆ ತಿಳಿಸಿಲಾಗಿದೆ.
ವಾಹನ – ಸಿಂಹ
ಉಪ ವಾಹನ- ಆನೆ
ಬಿಳಿ ವಸ್ತ್ರವನ್ನು ಧರಿಸಿಕೊಂಡು ಭುಶಂಡಿಯನ್ನು ಆಯುಧವಾನ್ನಾಗಿಸಿಕೊಂಡು ಮುಗ್ಧಾವಸ್ಥೆಯಲ್ಲಿ ಕುಳಿತು ಕೊಂಡಿದ್ದಾಳೆ. ಸಂಪಿಗೆ ಹೂವನ್ನು ಧರಿಸಿ ಚಿನ್ನದ ಪಾತ್ರೆಯಲ್ಲಿ ಅನ್ನ ಭಕ್ಷಣೆ ಮಾಡುತ್ತಿರುತ್ತಾಳೆ. ದೇವಜಾತಿಯಲ್ಲಿರುತ್ತಾಳೆ. ವಾರನಾಮ ನಂದಾ ಇದೆ. ನಕ್ಷತ್ರ ನಾಮ ಮಹೋದರಿ ಇದೆ. ಪಶ್ಚಿಮ ದಿಕ್ಕಿನಿಂದ ಪೂರ್ವದಿಕ್ಕಿಗೆ ಹೋಗುತ್ತಿದ್ದು, ಆಗ್ನೇಯ ದಿಕ್ಕನ್ನು ನೋಡುತ್ತಿದ್ದಾಳೆ.

ಸಂಕ್ರಾಂತಿ ಸಮಯದಲ್ಲಿ ಹಲ್ಲುಜ್ಜುವುದು, ಗಿಡ ಕೊಯ್ಯುವುದು, ದನಗಳ ಹಾಲು ಕರೆಯುವುದು, ಕಟುವಾಗಿ ಮಾತನಾಡುವುದು ಕಾಮ ಸೇವನೆ ಮಾಡುವುದು ಮಾಡಬಾರದು.

ಸಂಕ್ರಾಂತಿ ದೇವಿ ಉಪಯೋಗಿಸಿದ ವಸ್ತುಗಳು ತುಟ್ಟಿಯಾಗಲಿದೆ. ಆಹಾರ ಪದಾರ್ಥಗಳು, ಕೆಂಪು ಬಣ್ಣದ ತೊಗರಿ, ಕಬ್ಬು, ಬೆಲ್ಲ, ತಾಮ್ರ ಇತ್ಯಾದಿ ಪದಾರ್ಥಗಳು ತುಟ್ಟಿಯಾಗಲಿದೆ. ಆಗ್ನೇಯ ಭಾಗದ ದೇಶಗಳಿಗೆ ಕಷ್ಟಗಳು ಬರಲಿದೆ. ದೇಶವನ್ನಾಳುವ ರಾಜರಿಗೆ ಕೇಡಾಗಲಿದೆ. ಉತ್ತರ, ಈಶಾನ್ಯ, ಪಶ್ಚಿಮ ದೇಶಗಳಿಗೆ ದುರ್ಬಿಕ್ಷ ಕಾಡಲಿದೆ. ಕಳ್ಳಕಾಕರ ಹಾವಳಿ ಹೆಚ್ಚಾಗಲಿದೆ. ವ್ಯಾಪಾರಿ ವರ್ಗಕ್ಕೆ ಲಾಭವಾಗಲಿದೆ. ಬಡವರಿಗೆ ಧಾನ್ಯ ದೊರೆಯಬಹುದು ಹಾಗೂ ಅವರು ಸುಖಿಯಾಗಿರುವರು.

ಇತಿ ಶುಭಂ