ಯಾವುದೇ ಒಳ್ಳೆಯ ಕೆಲಸ ಮಾಡುವಾಗ ನಾವು ದಿನ ಮುಹೂರ್ತ ನೋಡುವ ಕ್ರಮವಿದೆ. ಬ್ರಹ್ಮ ಮುಹೂರ್ತ ಸಮಯದಲ್ಲಿ ಯಾವುದನ್ನೂ ನೋಡಬೇಕಾದ ಅವಶ್ಯಕತೆ ಇಲ್ಲ! ಹಾಗದರೆ ಯಾವ ಸಮಯವನ್ನು ಬ್ರಹ್ಮ ಮುಹೂರ್ತ ಎನ್ನುತ್ತಾರೆ ?.
ಕಶ್ಯಪ ಬ್ರಹ್ಮ ನಿಗೆ ಕದ್ರು ಮತ್ತು ವಿನತಿ ಎಂಬ ಇಬ್ಬರು ಹೆಂಡತಿಯರಿದ್ದರು. ಕದ್ರು ಮತ್ತು ವಿನತಿ ದಕ್ಷಪ್ರಜಾಪತಿಯ ಮಕ್ಕಳು ಪಾರ್ವತಿಯ ಸಹೋದರಿಯರು. ಕದ್ರು ಮತ್ತು ವಿನತಿಯರಿಬ್ಬರು ಸಂತಾನಭಿಲಾಷೆಯಿಂದ ಗಂಡನ ಸೇವೆಯನ್ನು ಮಾಡಿದರು. ಸೇವೆಗೆ ಮೆಚ್ಚಿದ ಕಶ್ಯಪ ಬ್ರಹ್ಮ ಇಬ್ಬರಿಗೂ ವರವನ್ನು ನೀಡಿದನು. ಕದ್ರು ತನಗೆ ಸಾವಿರ ಮಕ್ಕಳ ವರವನ್ನು ಕೇಳಿದರೆ ವಿನತಿ ಮಹಾಬಲಶಾಲಿಯಾದ ಇಬ್ಬರು ಮಕ್ಕಳನ್ನು ಕೇಳುತ್ತಾರೆ.
ಹೀಗೆ ಬಹುಸಂತಾನವನ್ನು ಬಯಸಿರುವುದರಿಂದ ಪಿಂಡೋತ್ಪನ್ನವಲ್ಲದೆ ಅಂಡೋತ್ಪನ್ನ ವಿಧಾನಕ್ಕೆ ವರವನ್ನು ನೀಡಿದರಿಂದ ಕದ್ರುವಿನ ಗರ್ಭದಲ್ಲಿ ಸಾವಿರ ಅಂಡಗಳು ವಿನತಿಯ ಗರ್ಭದಲ್ಲಿ ಎರಡು ಅಂಡಗಳು ಹುಟ್ಟಿದವು.
ಕದ್ರುವಿಗೆ ಆದಿಶೇಷ, ವಾಸುಕಿ, ತಕ್ಷಕ, ಕರ್ಕೊಟಕ ಮುಂತಾದ ಸಾವಿರ ನಾಗಜಾತಿಯರು ಹುಟ್ಟಿದರು. ವಿನತಿಯ ಜನಿಸಿದ ಅಂಡಗಳು ಒಡೆಯಲಿಲ್ಲ. ದಿನಗಳು ಗತಿಸಿ ಹೋಗುತ್ತಿದ್ದವು. ವಿನತಿ ತಡೆಯಲಾರದೆ ಒಂದು ಅಂಡವನ್ನು ಒಡೆದು ನೋಡಿದಳು.

ಕಶ್ಯಪ ಬ್ರಹ್ಮನ ತಪೋಶಕ್ತಿಯಿಂದ ಬೆಳೆಯುತ್ತಿರುವ ಅಂಡವನ್ನು ಅಪ್ರಾಪ್ತಕಾಲದಲ್ಲೇ ಒಡೆದ್ದರಿಂದ ಎರಡೂ ಕಾಲುಗಳಿಲ್ಲದ ಮಗನು ಹೊರಬರುತ್ತಾನೆ. ವಿನತಿ ತನ್ನ ಆತುರದ ನಿರ್ಧಾರಕ್ಕೆ ದುಃಖಿಸುತ್ತಿರುವಾಗ ಬ್ರಹ್ಮಕುಲವಯೋವೃದ್ಧನಾದ ಪರಮೇಶ್ಠಿಯು ಅಲ್ಲಿಗೆ ಬಂದು ಆ ಮಗುವನ್ನು ಆಶೀರ್ವದಿಸಿ “ವಿನತಿ ಕಾಲುಗಳಿಲ್ಲದ ಈ ನಿನ್ನ ಮಗ ಮಹಾಕೀರ್ತಿವಂತನಾಗುತ್ತಾನೆ. ಇವನು ಇಂದಿನಿಂದ ‘ಅನೂರ’ ಎಂಬ ಹೆಸರಿನಿಂದ ಸೂರ್ಯ ಸಮ ಕಾಂತಿವಂತನಾಗುತ್ತಾನೆ. ನಿನ್ನ ಮಗ ಸೂರ್ಯನ ರಥಸಾರಥಿಯಾಗಿ ಕೀರ್ತಿವಂತವನಾಗುತ್ತಾನೆ. ಅನೂರಕಾಂತಿ ಪ್ರಸರಿಸುವ ಸಮಯದಲ್ಲಿ ದುಷ್ಟಶಕ್ತಿಗಳು ಕೆಲಸ ಮಾಡುವುದಿಲ್ಲ. ಆದ್ದರಿಂದ ಈ ಮುಹೂರ್ತವನ್ನು “ಬ್ರಹ್ಮ ಮುಹೂರ್ತ” ಎಂದು ಕರೆಯಲಾಗುತ್ತದೆ. ಈ ಸಮಯದಲ್ಲಿ ಮಾಡುವ ಎಲ್ಲಾ ಕಾರ್ಯಗಳು ಶುಭಪ್ರದವಾಗಿರುತ್ತದೆ” ಎಂದು ಹಾರೈಸುತ್ತಾನೆ. ಆದ್ದರಿಂದ ಅನೂರಕಾಂತಿ ಪ್ರಸರಿಸುವ ಸಮಯವನ್ನು ಬ್ರಹ್ಮ ಮುಹೂರ್ತ ಎನ್ನಾಲಾಗಿದೆ ಮತ್ತು ಈ ಸಮಯದಲ್ಲಿ ಯಾವ ಕಾರ್ಯ ಬೇಕಾದರೂ ಮಾಡಬಹುದು.
ಇನ್ನಷ್ಟು ಧರ್ಮದ ಬಗ್ಗೆ ಓದಲು ಕಾಲ ನಿರ್ಣಯ ವೆಬ್ಸೈಟ್ ವೀಕ್ಷಿಸಿ
ಹೆಚ್ಚಿನ ಮಾಹಿತಿಗಾಗಿ ಕಾಲ ನಿರ್ಣಯ ಫೇಸ್ ಬುಕ್ ಪೇಜ್ ಲೈಕ್ ಮಾಡಿ ಹೆಚ್ಚು ಹೆಚ್ಚು ಮಂದಿಗೆ ಷೇರ್ ಮಾಡಿ