
ಸುರಲೋಕದಲ್ಲಿರುವ ಗಂಗೆಯನ್ನು ಭಗೀರಥನ ತಪೋಫಲದಿಂದ ಭೂಲೋಕಕ್ಕೆ ಇಳಿದು ಬಂದಳು. ಆದ್ದರಿಂದಲೇ ಗಂಗಾದೇವಿಯನ್ನು ಭಾಗೀರಥಿ ಎಂದು ಕರೆಯುತ್ತಾರೆ. ಮಹಾವಿಷ್ಣುವಿನ ಪಾದಗಳಲ್ಲಿ ಜನಿಸಿದ ಈ ಸುರಗಂಗೆ ಭಗೀರಥನ ಕಠೋರ ಹಠದಿಂದ ಹರಿತವಾದ ತಪಸ್ಸಿನಿಂದ ಮಹಾಶಿವನ ಜಟಾಜೂಟಕ್ಕೆ ಬಂದಿಳಿದಳು. ಶಿವನ ಅಪ್ಪಣೆ ಮೇರೆಗೆ ಭಗೀರಥನ ಬಯಕೆ ಸಾಫಲ್ಯಗೊಳಿಸಲು ಭೂಲೋಕದಲ್ಲಿ ನೆಲೆಸಿದಳು.
ಗಂಗಾನದಿಯನ್ನು “ಸುರನದಿ” ಎಂದು ಕರೆಯುತ್ತಾರೆ. ಸುರನದಿಯೆಂದರೆ ದೇವತೆಯರ ನದಿಯೆಂದರ್ಥ. ವಿಷ್ಣುಪುತ್ರಿ ಈಶ್ವರಪತ್ನಿಯಾಗಿರುವ ಕಾರಣಗಳಿಂದ ಸರ್ವಪಾಪ ಸಂಹಾರಿಣಿಯಾಗಿದ್ದಾಳೆ. ಗಂಗಾಜಲ ದಿವ್ಯೌಷಧಿಗಳಿಂದ ಮಿಶ್ರಿತವಾಗಿರುತ್ತದೆ. ಆರ್ಯರು ಪ್ರಾರಂಭದಲ್ಲಿ ಗಂಗಾನದಿಯನ್ನೇ ಆಶ್ರಯಿಸಿ ಜೀವನ ಸಾಗಿಸಿದ್ದಾರೆ. ಇದರಿಂದ ಉತ್ತರ ಭಾರತೀಯರಿಗೆ ಗಂಗಾನದಿ ತಾಯಿಸಮಾನವಾಗಿದ್ದಾಳೆ.

ಪ್ರಪಂಚದಲ್ಲಿ ಯಾವ ನದಿಯಾದರೂ ಬತ್ತಿ ಹೋಗಬಹದು ಆದರೆ ಗಂಗಾನದಿ ಬತ್ತಿಹೋಗುವುದಿಲ್ಲ. ಗಂಗೆ ಜೀವನದಿ. ಗಂಗೆಯನ್ನು ನಾವು ದೈವಭಾವನೆಯಿಂದ ಕಾಣಲು ಒಂದು ಕಾರಣವಿದೆ ನಮ್ಮ ಪೂರ್ವಜರೆಲ್ಲರೂ ನದಿಪ್ರಾಂತಗಳನ್ನು ಹುಡಿಕಿ ಗ್ರಾಮಗಳನ್ನು ನಿರ್ಮಾಣ ಮಾಡಿದ್ದಾರೆ. ಆಹಾರವಿಲ್ಲದಿದ್ದರೂ ಕೆಲವು ದಿನಗಳು ಜೀವಿಸಬಹುದು. ನೀರಿಲ್ಲದಿದ್ದರೆ ಯಾವ ಪ್ರಾಣಿಯೂ ಜೀವಿಸುವುದಿಲ್ಲ.
ಮಹನೀಯ ವ್ಯಕ್ತಿಗಳನ್ನು ನಾವು ಆಹ್ವಾನಿಸುವಾಗ ನೀರು ತುಂಬಿದ ಕಲಶಗಳಿಂದ ಸ್ವಾಗತ ಹೇಳುವುದು ನಿಮಗೆ ನೆನಪಿರಬಹುದು. ನಮ್ಮ ಮನೆಯಲ್ಲಿ ಯಾವುದೇ ಪೂಜೆ ನಡೆದರೂ ಮೊದಲು ನೀರಿನ ಕಲಶಕ್ಕೆ ಪೂಜೆ ಮಾಡುತ್ತೇವೆ. ಹೀಗೆ ಗಂಗಾನದಿ ನಮಗೆ ಪರಮಪವಿತ್ರ..