ಅದು ಒಂದನೇ ಕಾಮಿರಾಯ ಬಂಗರಾಜ ಒಡೆಯನ ಆಡಳಿತದ ಕಾಲ ( ಕ್ರಿಸ್ತ ಶಕ 1455 ರಿಂದ 1491 ) ಈತನ ಆಡಳಿತ ಕಾಲದಲ್ಲಿ ಕೋಟೆದ ಬಬ್ಬು ಎಂದು ಖ್ಯಾತಿಯ ಬಬ್ಬು ಸ್ವಾಮಿಯು ಕಡ್ತಿಕಲ್ಲ ಘಾಟಿ ಇಳಿದು ಬಂದನು. ಬರುವಾಗ ಬೊಬ್ಬರ್ಯನಿಗೂ ಈ ದೈವಕ್ಕೂ ಜಗಳವಾಗಿ ಬೊಬ್ಬರ್ಯನ ಅಹಂಕಾರಕ್ಕೆ ಆತನ ಕಾಲನ್ನು ಬಬ್ಬು ಕಡಿದನಂತೆ. ಈ ಬಬ್ಬು ಬಂಗವಾಡಿ ಪೇಟೆಗೆ ಬರುತ್ತಾನೆ. ಮನುಷ್ಯ ರೂಪದಿಂದ ಕಾಂಗ್ (ಕಪ್ಪು ವಸ್ತ್ರ) ಬಟ್ಟೆ ಧರಿಸಿದ ಈತನು ಪೇಟೆಗೆ ಬರುತ್ತಾನೆ. ಹಾಗೆ ಬಂಗವಾಡಿಯ ಅಂದ ಚಂದವನ್ನು ನೋಡುತ್ತಾ ಜವುಳಿ ಮಳಿಗೆಯ ಅನ್ನಪ್ಪ ಶೆಟ್ಟಿಯ ಅಂಗಡಿಗೆ ಬರುತ್ತಾನೆ. ಅಲ್ಲಿ ಜವುಳಿಯ ದೊಡ್ಡ ಮೂಟೆಯನ್ನು ನೋಡಿ ಇದಕ್ಕೆ ಬೆಲೆ ಎಷ್ಟು? . ಎಂದು ವಿಚಾರಿಸಿದನು. ಇಡೀ ಮೂಟೆಗೇ ಬೆಲೆಕೇಳುವ ಈ ಅಸ್ಪ್ರಶ್ಯ ಮುಂಡಾಲಯುವಕನಿಗೆ ಏನು ಜಂಬ.? ಎಂದು ಅನ್ನಪ್ಪ ಶೆಟ್ಟಿಗೆ ಕೋಪ ಬಂತು. ಆತನನ್ನು ನೋಡಿ ” ತಾದಿಡ್ ಪೋಪಿ ದಿಕ್ಕ್ ಗ್ ಕುಂಟುದ ಗಂಟ್ ಗೇ ಬಿಲೆ ಮಲ್ಪುನ ತಾಕತ್ತಯಾ!.?” (ದಾರಿ ಹೋಕ ಹೊಲೆಯನಿಗೆ ಜವುಳಿಗೆ ಬೆಲೆ ಕಟ್ಟುವ ಅಹಂಕಾರವೇ!.?) ಎಂದು ಹೀಯಾಳಿಸಿದನು. ಆಗ ಬಬ್ಬು ಅನ್ನಪ್ಪ ಶೆಟ್ಟಿಗೆ ಅದರಲ್ಲಿ ಕಾಂಗ್ ಕುಂಟು ಉಂಡತ್ತಾ!.? ಅಯಿಕ್ ಕೇಂಡೆ (ಕಪ್ಪು ವಸ್ತ್ರ ಇದೆ ಅಲ್ವಾ ಅದಕ್ಕೆ ಕೇಳಿದೆ)ಎಂದು ಹೇಳುತ್ತಾನೆ.
ಅನ್ನಪ್ಪ ಶೆಟ್ಟಿಗೆ ಮತ್ತಷ್ಟು ಕೋಪ ನೆತ್ತಿಗೇರಿತು. ಶ್ರೀಮಂತರು ಮೇಲ್ಜಾತಿಯವರು ಉಡುವಂತಹ ಬಟ್ಟೆಗಳಿವು ಇದರ ಬೆಲೆ ಕೇಳುತ್ತೀಯಾ ಎಂದು ಬಬ್ಬುವಿನ ಕುತ್ತಿಗೆಗೆ ಕೈ ಹಾಕಿ ಅಂಗಡಿಯಿಂದ ಹೊರಗೆ ದೂಡುತ್ತಾನೆ. ಆಗ ಬಬ್ಬು ಈ ಶೆಟ್ಟಿಯ ಅಹಂಕಾರಕ್ಕೆ ತಕ್ಕ ಶಾಸ್ತಿ ಮಾಡುತ್ತೇನೆಂದು ನೋಡನೋಡುತ್ತಿದ್ದಂತೆ ಎತ್ತರ ಬೆಳೆದು ತಕ್ಷಣ ಮಾಯವಾಗುತ್ತಾನೆ. ಅಷ್ಟೇ ಅಲ್ಲದೆ ಅನ್ನಪ್ಪ ಶೆಟ್ಟಿಯ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡು ಇಡಿ ಜವುಳಿ ಮಳಿಗೆಗಳಿಗೆ ಹಬ್ಬುತ್ತದೆ. ಪೇಟೆಯವರು ದಿಕ್ಕು ತೋಚದೆ ಅರಮನೆಗೆ ಹೋಗಿ ಬಂಗರಸರಲ್ಲಿ ವಿಷಯ ತಿಳಿಸುತ್ತಾರೆ. ಆಗ ಅರಸರು ಮಟ್ಟೂರ ಬಲ್ಯಾಯನನ್ನು ಕರೆದು ಪ್ರಶ್ನೆ ಇಟ್ಟಾಗ, ಬಲ್ಯಾಯನು ಇದು ಕೋಟೆದ ಬಬ್ಬುವಿನ ಆಗಮನದ ದೃಷ್ಟಾಂತ ಎಂದು ಹೇಳಿದನು. ಬಂಗರಸರು ದೈವದ ಕೋಪ ಉಪಶಮನಕ್ಕೆ ಪ್ರಾರ್ಥಿಸಿದರು. ಬೆಂಕಿ ಶಾಂತವಾಯಿತು. ಬಲ್ಯಾಯನ ಆದೇಶದಂತೆ ಅರಮನೆಯ ದಕ್ಷಿಣದಲ್ಲಿ “ಮರಿಶಿವರಾಯ” ನೆಂಬ ಹೆಸರಿನಿದ ಕೊಟೇದ ಬಬ್ಬುವನ್ನು ಪೇಟೆ ಮಾಗಣೆಯವರು ನಂಬಿದರು. ಈಗಲೂ ಒಂದು ಕಲ್ಲು ಅಲ್ಲಿ ಪೊದರಿನೆಡೆಯಲ್ಲಿ ಇದೆ.
ಆದರೆ ಈಗ ಮರಿಶಿವರಾಯನಿಗೆ ಆರಾಧನೆಯನ್ನು ಯಾರು ಮಾಡುತ್ತಿಲ್ಲ. ಈ ಶಿಥಿಲಗೊಂಡ ಕಲ್ಲನ್ನು ಪುನಶ್ಚೇತನಗೊಳಿಸಿ ಕೋಟೆದ ಬಬ್ಬುವಿಗೆ (ಮರಿಶಿವರಾಯ) ಜೀವಕಲೆ ತುಂಬುವ ಕೆಲಸವನ್ನು ಈ ಬಂಗಾಡಿ ಸೀಮೆಯ ಜನ ಮುಂದೆ ಬಂದು ಮಾಡಬೇಕಾಗಿದೆ.
ಈಗೀನ ಪೀಳಿಗೆಗೆ ಹಿಂದಿನ ಇತಿಹಾಸದಲ್ಲಿ ಬಂಗಾಡಿಯ ಗತ ವೈಭವದ ಆಡಳಿತ ಹಾಗೂ ದೈವ ದೇವರುಗಳ ಕಾರ್ಣಿಕದ ಶಕ್ತಿಯನ್ನು ತಿಳಿಸುವ ಸಣ್ಣ ಪ್ರಯತ್ನ
ಸಂಗ್ರಹ