ಗತ ಶಕ 1944 ಕ್ಕೆ ಸರಿಯಾದ ಈ ಶುಭಕೃತ್ ಸಂವತ್ಸರದಲ್ಲಿ ಶನಿಯೂ ರಾಜನಾಗಿ, ಗುರುವು ಮಂತ್ರಿಯಾಗಿ, ಬುಧನು ಸೈನಾಧಿಪತಿಯಾಗಿ ಅರ್ಘ ಮೇಘಗಳ ಅಧಿಪತಿಯಾಗಿಯೂ, ಶುಕ್ರನು ಧಾನ್ಯಾಧಿಪತಿಯಾಗಿ, ಚಂದ್ರನು ರಸಾಧಿಪತಿಯಾಗಿ, ಶನಿ ಸಸ್ಯಾಹಾರಿ ಮತ್ತು ನೀರಸಾಧಿಪತಿಯಾಗಿಯೂ ಇರುವರು.
ಈ ಸಂವತ್ಸರದ ಶುಭಾಶುಭ ಫಲಗಳನ್ನು ತಿಳಿಯುವುದಾದರೆ
ಈ ಶುಭಕೃತ್ ಸಂವತ್ಸರದಲ್ಲಿ ಜನರು ಉತ್ಸವ ಮಂಗಲ ಸಮಾರಂಭದಲ್ಲಿ ತೊಡಗಿ ಸಂತೋಷಭರಿತರಾಗಿರುತ್ತಾರೆ. ಗೋವುಗಳ ಅಭಿವೃದ್ದಿ ಗೊಳ್ಳುವವು. ಒಳ್ಳೆಯ ಮಳೆಯಾಗಿ ಸಸ್ಯಗಳೂ ಫಲಗಳೂ ಇನ್ನಿತರ ಬೆಳೆಗಳು ಧಾರಾಳ ಬೆಳೆಯುವವು. ಹಾಗೂ ಶನಿಯೂ ರಾಜನಾದುದರಿಂದ ಕೆಲವು ಕಡೆಗಳಲ್ಲಿ ಸಾಕಷ್ಟು ಮಳೆಯಾಗದೆ ನೀರು, ಫಲಪುಷ್ಪ ಆಹಾರಧಾನ್ಯಾದಿಗಳ ಕೊರತೆ ಉಂಟಾಗಲಿದೆ. ಜನರು ದುರ್ಭೀಕ್ಷ, ಕಳ್ಳರ ಹಾವಳಿ, ರೋಗರುಜಿನಗಳಿಂದ ಪೀಡಿತರಾಗುವರು. ರಾಜರುಗಳು ಯುದ್ಧಗಳಲ್ಲಿ ಆಸಕ್ತಿಯನ್ನು ಹೊಂದಲಿದ್ದಾರೆ.
ಗುರುವು ಮಂತ್ರಿಯಾದುದರಿಂದ ಮೇಘಗಳು ಧಾರಾಳವಾಗಿ ಮಳೆ ಸುರಿಸುವವು. ಆಹಾರ ಧಾನ್ಯ ವಿಪುಲವಾಗಿ ಬೆಳೆದು ಜನರು ಸಂತೋಷಭರಿತರಾಗುವರು. ಸರ್ಕಾರದ ಖಜಾನೆಯೂ ತುಂಬಿ ತುಳುಕುವುದು.
ಬುಧನು ಸೈನ್ಯಾಧಿಪತಿಯಾದುದರಿಂದ ಮೋಡಗಳು ಗಾಳಿಯ ಹೊಡೆತಕ್ಕೆ ಚದುರಿ ಕೆಲವೊಮ್ಮೆ ಕೆಲವು ಕಡೆ ಮಾತ್ರ ಮಳೆಯಾಗಲಿದೆ. ಸಸ್ಯ ಫಲವಸ್ತುಗಳು ಕೆಲವೆಡೆ ಮಾತ್ರ ಸಮೃದ್ಧಿಯಾಗಲಿದೆ.
ನೀಲರತ್ನ, ಮಾಂಸ, ಮೋಪು ಮರಮಟ್ಟುಗಳು ತಾಮ್ರ ಕಬ್ಬಿಣ ಇತ್ಯಾದಿ ಲೋಹಪಾತ್ರೆ ಕಪ್ಪುವಸ್ತ್ರ ಕಪ್ಪುಧಾನ್ಯ ಮುಂತಾದವುಗಳಿಗೆ ಬೆಲೆಯೇರಲಿದೆ
ಶುಭವಾಗಲಿ