ಋಗ್ವೇದ ಯಜುರ್ವೇದ ಸಾಮವೇದ ಅಥರ್ವವೇದ ಎಂದು ವೇದಗಳು ಇದ್ದರೆ ಇದಕ್ಕೆ ನಾಲ್ಕು ಉಪವೇದಗಳೂ ಇವೆ. ಅವು ಯಾವುವೆಂದರೆ ಆಯುರ್ವೇದ ಧನುರ್ವೇದ ಗಾಂಧರ್ವವೇದ ಅರ್ಥವೇದ.

ಆಯುರ್ವೇದದ ಬಗ್ಗೆ ತಿಳಿಯುವುದಾದರೆ ವೃಕ್ಷ ತರು ಲತಾದಿಗಳಿಂದಲೂ ಮತ್ತು ಭೂ ಉತ್ಪನ್ನಗಳಿಂದಲೂ ಮಾನವನದೇಹಕ್ಕೆ ಬೇಕಾಗುವ ಔಷಧಗಳನ್ನು ತಯಾರಿಸುವ ವೈದ್ಯ ಶಾಸ್ತ್ರವಾಗಿದೆ.

ಕೃತಯುಗದಲ್ಲಿ ದೇವದಾನವರು ಒಟ್ಟಾಗಿ ಸೇರಿಕೊಂಡು ಕ್ಷೀರಸಾಗರವನ್ನು ಮಥನ ಮಾಡಿದರು ಆಗ ಹಾಲಾಹಲ, ಶ್ರೀ ಲಕ್ಷ್ಮೀ, ಚಂದ್ರ, ಐರಾವತ, ಕಾಮಧೇನು, ಕಲ್ಪವೃಕ್ಷ, ರತ್ನ ರಾಶಿಗಳು ಉದ್ಭವಿಸಿದವು.ತದನಂತರ ಧನ್ವಂತರಿ ಎಂಬ ನಾರಾಯಣ ಸ್ವರೂಪ ಮಹಾತ್ಮನು ಒಂದು ಕೈಯಲ್ಲಿ ಅಮೃತಬಾಂಡವು ಮತ್ತೊಂದು ಕೈಯಲ್ಲಿ ವೈದ್ಯಶಾಸ್ತ್ರವನ್ನು ಧರಿಸಿ ಉದ್ಭವಿಸಿ ಬಂದ. ಈ ವೈದ್ಯ ಶಾಸ್ತ್ರವನ್ನೇ ಆಯರ್ವೇದವೆಂದು ಹೇಳುತ್ತಾರೆ.

ಹೀಗೆ ಕ್ಷೀರಸಾಗರದಲ್ಲಿ ಜನ್ಮಿಸಿದ ಧನ್ವಂತರಿಯೇ ದೇವತೆಗಳಿಗೆ ಅಮೃತವನ್ನು ಪ್ರಸಾದಿಸಿ ಮರಣಭಯದಿಂದ ಮುಕ್ತಿಗೊಳಿಸಿದ್ದಾನೆ. ಆಯುರ್ವೇದವನ್ನು ಬ್ರಹ್ಮದೇವರಿಗೆ ಪ್ರಸಾದಿಸಿದ್ದಾನೆ. ಬ್ರಹ್ಮದೇವನಿಂದ ದಕ್ಷಪ್ರಜಾಪತಿಗೆ, ದಕ್ಷನಿಂದ ದೇವಲೋಕ ವೈದ್ಯರಾದ ಅಶ್ವಿನಿಕುಮಾರರಿಗೆ ದಕ್ಕಿತು.

ಒಂದು ದಿನ ವಶಿಷ್ಠ ವಿಶ್ವಾಮಿತ್ರ ಭಾರದ್ವಾಜ ಅತ್ರಿ ದುರ್ವಾಸ ಭೃಗು ಅಂಗೀರಸ ಮುಂತಾದ ಮಹರ್ಷಿಗಳು ಹಿಮಪರ್ವತದಲ್ಲಿ ಸಮಾವೇಶಗೊಂಡಾಗ ಭೂಲೋಕದ ಮಾನವರ ದೇಹದ ಸಮಸ್ಯೆಗಳು ಚರ್ಚೆಗೆ ಬಂದವು. ದೇವಲೋಕದಿಂದ ಆಯುರ್ವೇದವನ್ನು ಭೂಲೋಕಕ್ಕೆ ತರಲು ಭಾರದ್ವಾಜ ಮಹರ್ಷಿಗಳನ್ನು ದೇವಲೋಕಕ್ಕೆ ಕಳುಹಿಸಿದರು. ಭಾರದ್ವಾಜರು ಈ ಶಾಸ್ತ್ರವನ್ನು ಆತ್ರೇಯ ಮಹರ್ಷಿಗೆ ಒಪ್ಪಿಸಿದರು. ಆತ್ರೇಯರಿಂದ ಅಗ್ನಿವೇಶ ಮಹರ್ಷಿಗೆ ಬಂತು. ಅಗ್ನಿವೇಶ ಮಹರ್ಷಿ ವೈದ್ಯ ತಂತ್ರ ವೆಂಬ ಗ್ರಂಥ ರಚಿಸಿದರು. ಈ ವೈದ್ಯ ಶಾಸ್ತ್ರವು ಕ್ರಿ.ಪೂ 2000-1000 ರಲ್ಲಿ ಚರಕಸಂಹಿತೆ ಎಂದು ರಚನೆಯಾಗಿತ್ತು. ಈ ಚರಕಮಹರ್ಷಿಗಳನ್ನೇ ಆಯುರ್ವೇದ ಗುರುಗಳು ಎಂದು ನಮಿಸುತ್ತಿದ್ದೇವೆ.